26/04/2026
ಹೃದಯದ ವಿದ್ಯುತ್ ಚಟುವಟಿಕೆಯನ್ನು ಡಿಜಿಟಲ್ ಪರದೆಯ ಮೇಲೆ ತೋರಿಸಿ ನಮ್ಮ ಹೃದಯ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸುಲಭವಾಗಿ ಅರ್ಥವಾಗುವಂತೆ ತಿಳಿಸುವ ECG ಯಂತ್ರವನ್ನು 1903ರಲ್ಲಿ ಕಂಡು ಹಿಡಿದ ಡಚ್ ವಿಜ್ಞಾನಿ "ವಿಲೆಮ್ ಐಂತೋವನ್" ರವರಿಗೆ ಈ ಮಹಾ ಸಂಶೋಧನೆಗಾಗಿ 1924ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿತು.
ಈ ಸಾಧನೆಗೆ ತಮ್ಮ ಪ್ರಯೋಗಾಲಯದ ಸಹಾಯಕನ ಪಾಲೂ ಇದೆ ಎಂದು ನಂಬಿದ್ದ "ಹೃದಯವಂತ" ಐಂಥೋವನ್ ರವರು ತಮಗೆ ಬಂದಿದ್ದ ಪ್ರಶಸ್ತಿ ಹಣದಲ್ಲಿ (40,000 ಡಾಲರ್) ಅರ್ಧ ಭಾಗವನ್ನು (20,000 ಡಾಲರ್) ವ್ಯಾನ್ ಡೆರ್ ವೋರ್ಡ್ ಗೆ ನೀಡಲು ನಿರ್ಧರಿಸಿದರು. ಆದರೆ ಆ ವೇಳೆಗೆ ಆತ ಮೃತಪಟ್ಟಿದ್ದರಿಂದ ಆತನ ಇಬ್ಬರು ಸಹೋದರಿಯರ ಮನೆಗಳನ್ನು ಹುಡುಕಿಕೊಂಡು ಹೋಗಿ ತಲುಪಿಸಿ ಬಂದರು.
ವಿಲ್ಲೆಮ್ ಐಂಥೋವನ್ ಅವರು 1860ರ ಮೇ 21 ರಂದು ಇಂಡೋನೇಷ್ಯಾದ ಜಾವಾದಲ್ಲಿ ಜನಿಸಿದರು. ನಂತರ ಅವರ ಕುಟುಂಬ ನೆದರ್ಲ್ಯಾಂಡ್‌ಗೆ ವಲಸೆ ಬಂದಿತು. ಉಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ ಇವರು, ಕೇವಲ 25ನೇ ವಯಸ್ಸಿನಲ್ಲಿ ಲೈಡನ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರದ (Physiology) ಪ್ರಾಧ್ಯಾಪಕರಾಗಿ ನೇಮಕಗೊಂಡರು.
ಲುಯಿಗಿ ಗ್ಯಾಲ್ವಾನಿ, ಕಾರ್ಲೊ ಮಟ್ಟೂಚಿ, ಗೇಬ್ರಿಯಲ್ ಲಿಸ್ಬನ್ ಮತ್ತು ಆಗಸ್ಟಸ್ ವಾಲರ್ ಅವರ ಕೆಲಸಗಳಿಂದ ಪ್ರೇರಿತರಾಗಿದ್ದ ಶರೀರಶಾಸ್ತ್ರಜ್ಞ ಐಂತೋವನ್ ಅವರು 1903 ರಲ್ಲಿ 'ಸ್ಟ್ರಿಂಗ್ ಗಾಲ್ವನೋಮೀಟರ್' ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದರು. ಇದು ಹೃದಯದ ಸ್ನಾಯುಗಳು ಸಂಕುಚಿತಗೊಂಡಾಗ ಉಂಟಾಗುವ ಅತ್ಯಂತ ಸೂಕ್ಷ್ಮವಾದ ವಿದ್ಯುತ್ ಸಂಕೇತಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿತ್ತು.
ಆಗಿನ ಕಾಲದಲ್ಲಿ ಹೃದಯದ ವಿದ್ಯುತ್ ಪ್ರವಾಹವನ್ನು ಅಳೆಯಲು ಆಗಸ್ಟಸ್ ವಾಲರ್ ಅವರು ಬಳಸುತ್ತಿದ್ದ ಯಂತ್ರಗಳು ಅಷ್ಟು ನಿಖರವಾಗಿರಲಿಲ್ಲ. ಐಂಥೋವನ್ ಅವರು ಅಂದು ಅಭಿವೃದ್ಧಿಪಡಿಸಿದ 'ಸ್ಟ್ರಿಂಗ್ ಗಾಲ್ವನೋಮೀಟರ್' ಯಂತ್ರವು ಸುಮಾರು 270 ಕೆಜಿ ತೂಕವಿದ್ದು, ಅತಿದೊಡ್ಡದಾಗಿತ್ತು ಮತ್ತು ಇದನ್ನು ನಿರ್ವಹಿಸಲು ಐದು ಜನರ ಅವಶ್ಯಕತೆಯಿತ್ತು. ಹಾಗಾಗಿ ಸಹಾಯಕನ ಪಾತ್ರವೂ ಇಲ್ಲಿ ಮಹತ್ವದ್ದಾಗಿತ್ತು.
ಐಂತೋವನ್ ಅವರು ECG ಲೀಡ್‌ಗಳನ್ನು ದೇಹದ ಮೇಲೆ ಹೇಗೆ ಜೋಡಿಸಬೇಕು ಎಂಬುದನ್ನು ವಿವರಿಸಲು 'ಐಂತೋವನ್ ತ್ರಿಕೋನ' ಎಂಬ ಕಲ್ಪನೆಯನ್ನು ನೀಡಿದರು. ಇದರ ಪ್ರಕಾರ ಬಲಗೈ, ಎಡಗೈ ಮತ್ತು ಎಡಗಾಲುಗಳ ನಡುವೆ ಹೃದಯವು ಮಧ್ಯಭಾಗದಲ್ಲಿದ್ದು, ವಿದ್ಯುತ್ ಪ್ರವಾಹವು ಒಂದು ತ್ರಿಕೋನದಂತೆ ಹರಿಯುತ್ತದೆ. ಅವರು ನೀಡಿದ 'ಐಂತೋವನ್ ನಿಯಮ' (Lead I + Lead III = Lead II) ಇಂದಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಇಸಿಜಿ ನಿಖರತೆಯನ್ನು ಪರೀಕ್ಷಿಸಲು ಬಳಕೆಯಾಗುತ್ತಿದೆ.
ಹೃದಯದ ಬಡಿತವನ್ನು ಅಲೆಗಳ ರೂಪದಲ್ಲಿ ದಾಖಲಿಸುವಾಗ, ಪ್ರತಿಯೊಂದು ಏರಿಳಿತಕ್ಕೂ ಐಂತೋವನ್ ಅವರು P, Q, R, S, ಮತ್ತು T ಎಂದು ಹೆಸರಿಟ್ಟರು. ಈ ಅಕ್ಷರಗಳು ಹೃದಯದ ರಕ್ತನಾಳಗಳು ಹೇಗೆ ಸಂಕುಚಿತಗೊಳ್ಳುತ್ತವೆ ಮತ್ತು ವಿಶ್ರಾಂತಿ ಪಡೆಯುತ್ತವೆ ಎಂಬುದನ್ನು ಸೂಚಿಸುತ್ತವೆ. ಇಂದಿಗೂ ಜಗತ್ತಿನಾದ್ಯಂತ ವೈದ್ಯರು ಇದೇ ಮಾನದಂಡವನ್ನು ಬಳಸಿ ಹೃದಯದ ಕಾಯಿಲೆಗಳನ್ನು ಪತ್ತೆಹಚ್ಚುತ್ತಾರೆ.
ಐಂತೋವನ್ ಅವರ ಕಾಲದಲ್ಲಿ ಸುಮಾರು 270 ಕೆಜಿ ತೂಕವಿದ್ದ ಇಸಿಜಿ ಯಂತ್ರವು ಇಂದು ಅದು ಕೈಯಲ್ಲಿ ಹಿಡಿಯುವಷ್ಟು ಸಣ್ಣ ಸಾಧನವಾಗಿ ಮಾರ್ಪಟ್ಟಿದೆ. ಆದರೆ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ, ಐಂತೋವನ್ ಅವರು ರೂಪಿಸಿದ ಹೃದಯ ಪರೀಕ್ಷೆಯ ಮೂಲಭೂತ ತತ್ವಗಳು ಇಂದಿಗೂ ಬದಲಾಗಿಲ್ಲ. ಕೋಟ್ಯಂತರ ಜನರ ಜೀವ ಉಳಿಸಲು ಅವರ ಈ ಸಂಶೋಧನೆ ದಾರಿದೀಪವಾಗಿದೆ.
ಆಸ್ಪತ್ರೆಗಳ ICUನಲ್ಲಿ ಜೀವದ ಸಂಕೇತವಾಗಿ ಡಿಜಿಟಲ್ ಪರದೆಯ ಮೇಲೆ ಮೂಡಿಬರುವ ECG ಗ್ರಾಫ್ ನೋಡಿದಾಗ ಅಥವಾ ಅದರ ಹಿನ್ನೆಲೆಯಲ್ಲಿ "ಬೀಪ್... ಬೀಪ್... ಸದ್ದು ಕೇಳಿ ಬಂದಾಗ ಐಂತೋವನ್ ಮತ್ತವರ ಸಹಾಯಕನ ಶ್ರಮವನ್ನು ಒಮ್ಮೆ ಸ್ಮರಿಸಿಕೊಳ್ಳಿ.