25/09/2026
ಇಂದು ನಗರಗಳ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ
ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ತ್ರಿಪುರವಾಸಿನಿಯ ಐ.ಪಿ.ಡಿ. ಸಾಲಪ್ಪ ವೇದಿಕೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಪೌರಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗಾಗಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹಲವು ಸೌಲಭ್ಯಗಳನ್ನು ಘೋಷಿಸಿದರು.
✅ ಪ್ರಸ್ತುತ 700 ಜನರಿಗೆ ಒಬ್ಬ ಪೌರಕಾರ್ಮಿಕರಿರುವ ಅನುಪಾತವನ್ನು ಬದಲಿಸಿ, ಪ್ರತಿ 500 ಜನರಿಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸುವುದು.
✅ ಖಾಯಂ ಪೌರಕಾರ್ಮಿಕರ ವಿಶೇಷ ಭತ್ಯೆಯನ್ನು ₹7,000ರಿಂದ ₹10,000ಕ್ಕೆ ಹೆಚ್ಚಿಸಲಾಗುವುದು. ನೇರ ನೇಮಕಾತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ₹5,000 ವಿಶೇಷ ಭತ್ಯೆ ನೀಡಲಾಗುವುದು. ಅಲ್ಲದೆ, ಬೆಳಗಿನ ಉಪಾಹಾರ ಭತ್ಯೆಯನ್ನು ₹35ರಿಂದ ₹50ಕ್ಕೆ ಹೆಚ್ಚಿಸುವುದು.
✅ ಪೌರಕಾರ್ಮಿಕರ ಹಿತರಕ್ಷಣೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪ್ರತ್ಯೇಕ ಕರ್ನಾಟಕ ಪೌರಕಾರ್ಮಿಕರ ಕಲ್ಯಾಣ ಮಂಡಳಿ ರಚಿಸುವುದು.
✅ ವಸತಿ ರಹಿತ ಖಾಯಂ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ₹6 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ₹1.50 ಲಕ್ಷ, ಒಟ್ಟು ₹7.50 ಲಕ್ಷ ಆರ್ಥಿಕ ನೆರವು ಒದಗಿಸುವುದು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್, ಕೃಷಿ ಸಚಿವರಾದ ಶ್ರೀ ಪಿ. ಎಂ. ನರೇಂದ್ರ ಸ್ವಾಮಿ, ಪೌರಾಡಳಿತ ಸಚಿವರಾದ ಶ್ರೀ ಎಚ್. ಸಿ. ಬಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ, ಮೀನುಗಾರಿಕೆ ಮತ್ತು ಬಂದರುಗಳು, ಒಳನಾಡು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಶ್ರೀ ಕೆ. ಎಸ್. ಬಸವಂತಪ್ಪ, ಮಾಜಿ ಸಚಿವರಾದ ಶ್ರೀ ಹೆಚ್. ಆಂಜನೇಯ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀಮತಿ ಬಿ. ಬಿ. ಕಾವೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.