13/04/2026
ಮರಳಿ: ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ದೊಡ್ಡದು.
ಗಂಗಾವತಿಯ (ಮರಳಿ ಗ್ರಾಮ ದಲ್ಲಿ)
ಸಮಾಜದಲ್ಲಿನ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಯುವ ಪೀಳಿಗೆಯಲ್ಲಿ ವೈಚಾರಿಕ ಜಾಗೃತಿ ಮೂಡಿಸಲು ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಗಳು ಪೂರಕವಾಗಿವೆ ಎಂದು ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮರಳಿಯ ಎಸ್.ಎಮ್.ಬಿ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ “ಶ್ರೀಮತಿ ಶಿವಪುತ್ರಮ್ಮ ಗಂಡ ಮಹದೇವಯ್ಯ ಹರಿಗೇರಿ ಮಠ” ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಮರಳಿಯ ಶ್ರೀಮತಿ ಎಮ್.ಎನ್.ಬಿ.ವಿ. ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನೆ:
ಎಮ್.ಎಸ್.ಎಮ್.ಎಸ್. ಸಮೂಹ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಚ್.ಎಮ್. ಸಿದ್ರಾಮಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಇಂತಹ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು” ಎಂದರು.
ವಿಶೇಷ ಉಪನ್ಯಾಸ:
‘ಭಾರತ ಸ್ವಾತಂತ್ರ್ಯದಲ್ಲಿ ಕೆಲವು ಮಹಿಳೆಯರ ಪಾತ್ರ ಹಾಗೂ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಎಸ್.ಕೆ.ಎನ್.ಜಿ. ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮಮ್ತಾಜ್ ಬೇಗಂ, “ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದವರೆಗೆ ಮಹಿಳೆಯರ ಕೊಡುಗೆ ಅಪಾರ. ಕುಟುಂಬದಲ್ಲಿ ಸಂಸ್ಕಾರ ನೀಡುವ ಮಹಿಳೆ ಮನಸ್ಸು ಮಾಡಿದರೆ ಭ್ರಷ್ಟಾಚಾರ ಮುಕ್ತ ನಾಡು ಕಟ್ಟಲು ಸಾಧ್ಯ” ಎಂದು ಪ್ರತಿಪಾದಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ರುದ್ರೇಶ ಎಂ. ಆರ್‍ಹಾಳ, ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಎಚ್.ಎಮ್. ವಿರೂಪಾಕ್ಷಯ್ಯ ಸ್ವಾಮಿ, ಎಚ್.ಎಮ್. ಬಸವರಾಜ ಸ್ವಾಮಿ, ಜಿಲ್ಲಾ ಕಸಾಪ ಕೋಶಧ್ಯಕ್ಷ ರಮೇಶ್ ಕುಲಕರ್ಣಿ ಹಾಗೂ ಸಹಕಾರ್ಯದರ್ಶಿ ಪ್ರಸನ್ ದೇಸಾಯಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಹುಸೇನ್ ಪೀರ್, ಶಿಲ್ಪಾ ಜಿ. ಬಿರದಾರ, ಅಬ್ದುಲ್ ಖಾದರ್ ಜಿಲಾನಿ, ಕಸಾಪ ತಾಲೂಕು ಕಾರ್ಯಕಾರಿ ಮಂಡಳಿ ಸದಸ್ಯರಾದ ಶರಣಪ್ಪ ಮಟ್ಟಿ, ಕೆ. ಕಾಂತರಾವ್ ಹಾಗೂ ಮರಳಿ ಹೋಬಳಿ ಘಟಕದ ಅಧ್ಯಕ್ಷ ಯಮನೂರಪ್ಪ ಭಾಗವಹಿಸಿದ್ದರು.
ಕಾರ್ಯಕ್ರಮದ ವಿವರ:
ಪ್ರಶಿಕ್ಷಣಾರ್ಥಿ ಕುಮಾರಿ ಈಶಮ್ಮ ಬಿ. ಈಡಿ ಪ್ರಾರ್ಥಿಸಿದರು. ಶ್ರೀ ಮೌನೇಶ್ ಬಡಿಗೇರ್ ಸ್ವಾಗತಿಸಿದರು. ಉಪನ್ಯಾಸಕಿ ಕುಮಾರಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗದ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ದತ್ತಿಯ ದಾನಿಗಳಾದ ಜಂಗಮರ ಕಲ್ಗುಡಿಯ ಡಾ. ಎಂ. ಎಂ. ಹರಿಗೇರಿ ಮಠ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.