27/11/2023
ನಿದ್ರೆ ಬಾರದೆ ಹೊರಳಾಡುತ್ತಿದ್ದೆ ನಾನು
ತಣ್ಣನೆಯ ಗಾಳಿ ಸೇವಿಸುತ್ತಾ ನದಿಗುಂಟ ನಡೆದೆ
ನೀರವ ರಾತ್ರಿಯಲಿ ಬಿಕ್ಕುವ ದನಿ ಕೇಳಿ
ಚಕಿತನಾಗಿ ನಾ ಅಲ್ಲೇ ನಿಂತೆ
ದೂರದಲಿ ಅಸ್ಪಷ್ಟ ಆಕಾರ ಕಾಣುತಿದೆ,
ನಡುಗುವ ಹೆಜ್ಜೆ ಹಿಡಿದು ನೋಡಿ ಬೆಚ್ಚಿದೆ
ಸರ್ವಾಲಂಕಾರ ಭೂಷಿತ ದಿವ್ಯ ಸ್ತ್ರೀ ಅಳುತಿಹಳು ಅಲ್ಲಿ
"ಯಾರು ನೀ ತಾಯೇ? ಏಕೆ ಈ ದುಃಖ? ಈ ನೋವು?
ತಿರುಗಿ ನೋಡಿದಳೊಮ್ಮೆ ನುಡಿದಳು " ನಾ ಕನ್ನಡ ತಾಯಿ"
"ನನ್ನೊಲುಮೆಯ ತಾಯೆ! ಏಕೆ ಈ ಸಂಕಟ?
ಏಕೆ ಈ ದುಃಖ? ಅಪರಾತ್ರಿಯಲಿ ಏಕಾಂಗಿ ಶೋಕಿಸುತಿಹೆ ಏಕೆ?"
ಹೆತ್ತ ಮಕ್ಕಳ ಅನಾಧರ ಪಡೆದ ತಾಯಿ ಸುಖಿಪಳೇ?"
"ನಿನ್ನ ಮಕ್ಕಳು ನಾವು, ಅನಾಧರಿಸಲೆಂತು ನಿನ್ನ?
ನಿನ್ನ ರಾಜ್ಯದಿ ನೀನೆ ಮರುಗುತಿಹೆ ಏಕಿಂತು?"
"ಎಲ್ಲಿದೆ ನನ್ನ ನಾಡು? ಎಲ್ಲಿದೆ ನನ್ನ ನುಡಿ?
ನನ್ನ ನೆಲ ಜಲವೆಲ್ಲಾ ಪರರ ಸೊತ್ತಾಗಿಹುದು,
ಪಂಪ ರನ್ನರ ಜನ್ನ ಹರಿಹರರ ಕುಮಾರವ್ಯಾಸರ ರತ್ನಾಕರನ ಕಾವ್ಯಸೊಗ ಈಗೆಲ್ಲಿ?
ವಚನ ಕ್ರಾಂತಿ, ದಾಸರಾ ಪದಗಳ ವೈಭವ ಇನ್ನೆಲ್ಲಿ?
ಎಲ್ಲಿ ಅಡಗಿದೆನೃಪತುಂಗನ ಸಾಹಸ?
ಪುಲಿಕೇಶಿಯ ಪರಾಕ್ರಮ, ರಣಧೀರನಾ ಆರ್ಭಟ?
ಹೆತ್ತಬ್ಬೆಯ ನುಡಿಯ ಆಡಲೊಲ್ಲರು ನನ್ನ ಮಕ್ಕಳು,
ತಮ್ಮ ಹೆಸರ ನನ್ನ ಮೂಲಕ ಬರೆಯಲೊಲ್ಲರು,
ನನ್ನ ಸಾಹಿತ್ಯ ಇಂದವರಿಗೆ ಬೆಡವಾಗಿದೆ
ನನ್ನ ನೆಲವೆಂದರೆ ಬರಿಯ ನೆಲವಲ್ಕ, ಅದು ಸ್ವರ್ಗ
ಇಂದಾಗಿದೆ ಅದು ಭೂಗಳ್ಳರ ನೆರೆಮನೆ
ನನ್ನ ಕಾಜಾಣ ಅಳಿಯುತಿದೆ, ಪ್ರಾಣಿ ಪಕ್ಷಿಗಳು ನಶಿಸುತಿದೆ,
ಶ್ರೀಗಂಧದ ತರುವೆಲ್ಲಾ ಕೊಡಲಿಗಳಿಗಾಹಾರವಾಗುತಿದೆ
ನನ್ನತನ, ತನ್ನತನ, ಕಳೆದುಕೊಂಡಿಹರು ನನ್ನ ಮಕ್ಕಳು
ದುಃಖಿಸದೇ ಎಂತಿರಲಿ ನಾನು? ಸುಖಿಸಲೇ ಈಗಿನ್ನು?
ನಾಚಿಕೆಯಿಂದ ತಲೆ ತಗ್ಗಿಸಿ ನಾ ನುಡಿದೆ
ಅಮ್ಮ, ನಿನ್ನ ಮಕ್ಕಳು ನಾವು, ಹೆತ್ತಬ್ಬೆಯ ಮರೆತೆವು
ಕ್ಷಮೆ ಇರಲಿ ತಾಯೇ ನಿನ್ನ ಮಕ್ಕಳ ಮೇಲೆ
ಅರಿತರಿತೂ ತಪ್ಪಿ ನಡೆದೆವು ನಾವು, ಮರೆತು ಬಾಳಿದೆವು
ಆ ಹನುಮನಂತೆ ನಮ್ಮ ಶಕ್ತಿಯ ನಾವೇ ಮರೆತೆವು
ಚಿಂತಿಸದಿರು ತಾಯೇ ಮುಂದೆ ಇದೆ ಸುವರ್ಣಪಥ
ಸ್ವಾಭಿಮಾನದ ಹೆಜ್ಜೆಯ ಮೊದಲಿಡುವೆವು
ನಿನ್ನ ಕಾಡುವ ಅನ್ಯರ ಹೊರಗಟ್ಟುವೆವು
ನಿನ್ನ ಪಾದವ ನಂಬಿ ಮುನ್ನಡಿ ಇಡುವೆವು
ಹರಸು ತಾಯೇ ನಿನ್ನ ಮಕ್ಕಳನು"
ತಾಯಿ ನಕ್ಕಳು ಅಮೃತಕರೆವ ತನ್ನ ಕರವ ಸೋಂಕಿಸಿದಳು ಎನ್ನ ಶಿರಕೆ
ಬೆಳಕಿನ ಕಿರಣದಲಿ ಕರಗಿ ಹೋದಳು ತಾಯಿ
ನಾನಲ್ಲೇ ನಿಂತೆ ಮನ
( ಭಾನುವಾರ ನಡೆದ ಅಂತರ್ಜಾಲ ಮೂಲದ ಕವಿಗೋಷ್ಠಿಯಲ್ಲಿ ಅಧ್ಯಕ್ಷನ ನೆಲೆಯಲ್ಲಿ ವಾಚಿಸಿದ್ದು. ಇದನ್ನು 'ಕವಿತೆ' ಎಂದು ನೀವೆಲ್ಲರೂ ಒಪ್ಪಿದರೆ ಆಯಿತು. ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಸಿದ್ಧವಾದ ಕವಿತೆಯೊಂದರ ದುರ್ಬಲ ನಕಲು ಇದು. ಮೂಲ ಯಾವುದಿರಬಹುದೆಂದು ಊಹಿಸಬಲ್ಲಿರೆ ಜಾಣ ಓದುಗರು.?)