19/01/2026
*ಹಿರಿಯ ವಿದ್ಯಾರ್ಥಿ ಸಂಘ ಸಮ್ರಿಷ್ಟ–2025
ಸರಸ್ವತಿ ಮಂಟಪ ನಿರ್ಮಾಣಕ್ಕೆ ದೇಣಿಗೆ ಹಸ್ತಾಂತರ*
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ “ಸಮ್ರಿಷ್ಟ–2025” ಕಾರ್ಯಕ್ರಮವು ದಿನಾಂಕ 27/12/2025ರ ಶನಿವಾರ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಸರಸ್ವತಿ ವಿಗ್ರಹಕ್ಕೆ ಮಂಟಪ ನಿರ್ಮಾಣಕ್ಕಾಗಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ದೇಣಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಜೀವ ಸದಸ್ಯರಾದ ಶ್ರೀ ಟಿ.ಎ. ರಾಮಪ್ರಸಾದ್ ಅವರು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದರು. ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕಾಲೇಜು ಸದೃಢವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಶ್ರೀ ಎ.ಎನ್. ರಾಮಚಂದ್ರ ಅವರು, ವಿದ್ಯಾ ಸಂಸ್ಥೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವ ಮತ್ತು ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಬಿ.ಎಸ್. ವಹಿಸಿ ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘವು ಕೇವಲ ಸಂಘಟನೆಯಲ್ಲದೆ, ಸಂಸ್ಥೆಯ ಪ್ರಗತಿಗೆ ಬೆಂಬಲವಾಗಿರುವ ಶಕ್ತಿಯಾಗಿದೆ ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕ ನುಡಿಯನ್ನು ಸಂಘದ ಅಧ್ಯಕ್ಷರು ಹಾಗೂ ಕಾಲೇಜಿನ ಉಪನ್ಯಾಸಕರಾದ ಶ್ರೀ ವಿನಯ್ ಎಚ್.ಬಿ.ಪಟೇಲ್ ಅವರು ಮಾತನಾಡಿ ಸಂಘದ ಉದ್ದೇಶಗಳು ಹಾಗೂ ಸರಸ್ವತಿ ಮಂಟಪ ನಿರ್ಮಾಣದ ಮಹತ್ವವನ್ನು ವಿವರಿಸಿದರು.
ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷರಾದ ಶ್ರೀ ಓಂಕಾರ್, ಕಾರ್ಯದರ್ಶಿಗಳಾದ ಪೃಥ್ವಿರಾಜ್ ಗಿರಿ ಮಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಕುಶಾಲ್, ಖಜಾಂಚಿಗಳಾದ ಶ್ರೀ ಸುಪ್ರೀತ್, ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ಅವರು ಸುಂದರವಾಗಿ ನಿರೂಪಿಸಿದರು. ಶ್ರೀ ಪ್ರಮೋದ್ ಮಠ ಅವರು ಸ್ವಾಗತ ಭಾಷಣ ಮಾಡಿದರು. ಕು. ರಚನಾ ಅವರು ಪ್ರಾರ್ಥನೆ ನೆರವೇರಿಸಿದರು. ಶ್ರೀ ಸಂಜಯ್ ಅವರು ವಂದನಾರ್ಪಣೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ನಂತರ ಹಿರಿಯ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರಿಯಾತ್ಮಕ ಆಟಗಳನ್ನು ಆಯೋಜಿಸಿ ಮನರಂಜನೆ ಒದಗಿಸಲಾಯಿತು. ಕಾರ್ಯಕ್ರಮವು ಸೌಹಾರ್ದಯುತ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.