21/06/2024
ವಿಜ್ಞಾ(ಪ)ನ
“ವಾಸನಾಲಜಿ”- ಭಾಗ-೨೧
“ಸುಗಂಧ ಸಾಮ್ರಾಜ್ಯ-೨”
ಹಿಂದಿನ ಅಂಕಣದಲ್ಲಿ ಸುಗಂಧಗಳ ಜಾಗತಿಕ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಬರೆಯಲಾಗಿತ್ತು. ‘ಸುಗಂಧದ್ರವ್ಯ’ಗಳ ಕುರಿತು ಇಣುಕುವ ಪೂರ್ವದಲ್ಲಿ, ಭಾರತದ ಸುಗಂಧದ್ರವ್ಯ ಇತಿಹಾಸದ ಒಂದು ಪಕ್ಷಿನೋಟ ಅವಶ್ಯಕವೆನಿಸುತ್ತದೆ. ಭೌಗೋಳಿಕ, ಸಾಮಾಜಿಕ, ಹಾಗೂ ಧಾರ್ಮಿಕ ವೈವಿಧ್ಯತೆಯ ಹಿನ್ನಲೆಯಲ್ಲಿ, ಭಾರತವನ್ನು ಒಂದು ಉಪಖಂಡವೆಂದೇ ಹೇಳಲಾಗುತ್ತದೆ. ಆದ್ದರಿಂದ ಭಾರತದೇಶದ ಹಿನ್ನಲೆಯಲ್ಲಿ ಯಾವ ವಿಷಯದ ಇತಿಹಾಸವನ್ನು ಹೇಳುವುದೂ ಒಂದು ಸವಾಲಿನ ಸಂಗತಿ. ಭಾರತೀಯ ಸುಗಂಧದ್ರವ್ಯ ಇತಿಹಾಸವು- ಭಾರತದ ವೈವಿಧ್ಯಮಯ ಸಂಸ್ಕೃತಿ, ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳೊಂದಿಗೆ ಬೆಸೆದುಕೊಂಡಿದೆ.
ಭಾರತದಲ್ಲಿ ‘ಸುಗಂಧ’- ಒಂದು ಸಾಂಸ್ಕೃತಿಕ ಲಾಂಛನ, ಅಧ್ಯಾತ್ಮಿಕ ವಾಹಕ ಹಾಗೂ ವಿವಿಧ ಕಾಲಘಟ್ಟದಲ್ಲಿ ಸಾಗುವ ಸಂವೇದನೆಯ ಒಂದು ಪಯಣ. ಆಘ್ರಾಣಿಸಲು ಉತ್ತೇಜಿಸುವ ವಿವಿಧ ಪರಿಮಳಕಾರಿಗಳಾದ ಗ್ರಂಥಿಗೆ ಸಾಮಗ್ರಿಗಳು- ಧೂಪ, ಮಡ್ಡಿ, ಕರ್ಪೂರ, ಅಗರಬತ್ತಿ, ಅತ್ತರು, ಗುಲಾಬಿನೀರು, ಶ್ರೀಗಂಧ, ಚಂದನ ಮುಂತಾದವುಗಳೆಲ್ಲಾ ಭಾರತೀಯರ ಧಾರ್ಮಿಕ ಆಚರಣೆ, ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿ ದೈನಂದಿನ ಬದುಕಿನ ಭಾಗವಾಗಿದೆ.
ಇತಿಹಾಸವು ಸರಿಯಾಗಿ ದಾಖಲಾಗಿರದ ಕಾಲಕ್ಕೂ ಪೂರ್ವದಿಂದಲೆ ಇವುಗಳ ಬಳಕೆ ರೂಢಿಗತವಾಗಿರಬಹುದೆಂದು ಭಾವಿಸಲಾಗಿದೆ. ಸಿಂಧೂನದಿಯ ನಾಗರೀಕತೆಯದ್ದೆಂದು ಹೇಳಲಾದ ‘ಟೆರ್ರಾಕೋಟ’ ಅಂದರೆ ಸುಟ್ಟ ಕೆಂಪುಮಣ್ಣಿನಿಂದ ಮಾಡಿದ ವಿವಿಧ ಪರಿಕರಗಳು ಉತ್ಖನನದಲ್ಲಿ ದೊರೆತಿವೆ, ಇವುಗಳನ್ನು ತಕ್ಷಶಿಲಾದ(ಪಂಜಾಬ್ ಪ್ರಾಂತ್ಯದ ಪಾಕಿಸ್ಥಾನದಲ್ಲಿನ) ಪ್ರಾಚ್ಯವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಸಸ್ಯಜನ್ಯಸೌಂದರ್ಯವರ್ಧಕಗಳ (ಫೈಟೋಕಾಸ್ಮೆಟಿಕ್ಸ್) ಪಿತಾಮಹನೆಂದೆ ಖ್ಯಾತನಾದ ಇಟಲಿಯ ‘ಪ್ರೊಫೆಸರ್ ಪಾವೆಲೊ ರೊವೆಸ್ಟಿ’ಯು ತಕ್ಷಶಿಲಾಕ್ಕೆ ೧೯೭೫ರಲ್ಲಿ ಭೇಟ್ಟಿನೀಡಿದಾಗ- ಆ ಟೆರ್ರಾಕೋಟ ದಿಂದ ಮಾಡಿದ ಉಪಕರಣಗಳು ಸುಗಂಧದ್ರವ್ಯವನ್ನು ತಯಾರಿಸುವ ಆಸವನ ಉಪಕರಣ ಹಾಗೂ ಸಾರಭೂತ ತೈಲಗಳ ಸಂಗ್ರಾಹಕಗಳೆಂಬುದಾಗಿ ಗುರುತಿಸಿದ. ಕಾರ್ಬನ್ ಡೇಟಿಂಗ್ ತಂತ್ರಜ್ಞಾನದಿಂದ ಈ ಪರಿಕರಗಳು ಕ್ರಿಸ್ತಪೂರ್ವ ೩೦೦೦ನೇ ಇಸವಿಗೂ ಮೊದಲಿನವೆಂದು ಪತ್ತೆಹಚ್ಚಲಾಯ್ತು.
ವೇದ ಕಾಲ: ವೇದ ಕಾಲ(ಕ್ರಿ.ಪೂ. ೧೫೦೦–೫೦೦)ದಲ್ಲಿ, ಸುಗಂಧದ್ರವ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೀವ್ರವಾಗಿ ಸಂಯೋಜಿತವಾಗಿತ್ತು. ವೇದಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ವೈಯಕ್ತಿಕ ಆರೈಕೆಗೆ ಶ್ರೀಗಂಧ, ಅಗಾರ್ ಮರಗಳಿಂದ ತೆಗೆದ ಹಾಗೂ ಇತರೆ ಹಲವಾರು ಸುಗಂಧದ್ರವ್ಯಗಳ ಬಳಕೆಯನ್ನು ಉಲ್ಲೇಖಿಸಲಾಗಿದೆ.
ಆಯುರ್ವೇದ: ಭಾರತೀಯ ಪಾರಂಪರಿಕ ವೈದ್ಯಕೀಯ ವ್ಯವಸ್ಥೆಯಾದ ಆಯುರ್ವೇದದಲ್ಲಿ ಸುಗಂಧದ್ರವ್ಯಗಳು ಹಾಗೂ ಸಾರಭೂತತೈಲಗಳು ಅವುಗಳ ಔಷಧೀಯ ಗುಣಗಳಿಂದಾಗಿ ವ್ಯಾಪಕವಾಗಿ ಬಳಸಲ್ಪಟ್ಟಿವೆ. ಚರಕಸಂಹಿತಾ ಮತ್ತು ಸುಶ್ರುತ ಸಂಹಿತಾ ಮುಂತಾದ ಪಠ್ಯಗಳಲ್ಲಿ ಸುಗಂಧದ್ರವ್ಯಗಳನ್ನು ಆರೋಗ್ಯ ಮತ್ತು ಸ್ವಚ್ಛತೆಗೆ ಬಳಸುವ ಕುರಿತು ವಿವರಿಸಲಾಗಿದೆ.
ವ್ಯಾಪಾರದ ಪ್ರಭಾವ: ಭಾರತ, ಮಧ್ಯಪ್ರಾಚ್ಯ ಹಾಗೂ ಪಾಶ್ಚಿಮಾತ್ಯ ದೇಶಗಳೊಂದಿಗೆ ಬೆಳೆದ ವ್ಯಾಪಾರೀ ಮಾರ್ಗಗಳಿಂದಾಗಿ(ಟ್ರೇಡ್ರೂಟ್- ರೇಷ್ಮೆದಾರಿ), ಸುಗಂಧದ್ರವ್ಯ ಹಾಗೂ ತತ್ಸಂಬಂಧಿ ತಂತ್ರಗಳ ವಿನಿಮಯವು ವ್ಯಾಪಕವಾಯ್ತು. ಭಾರತೀಯ ಪರಿಮಳದ್ರವ್ಯಗಳು, ಅತ್ತರಗಳು (ಸಾರಭೂತತೈಲಗಳು) ಬಹುಮೂಲ್ಯ ಮಾರಾಟದ ಸರಕುಗಳಾದವು. ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪ್ ಮತ್ತು ಮಧ್ಯಪ್ರಾಚ್ಯದೊಂದಿಗೆ ವ್ಯಾಪಾರ ಮಾಡಲು ರೋಮನ್ ಸಾಮ್ರಾಜ್ಯದ ಉತ್ತುಂಗದಲ್ಲಿ ರೋಮ್ಗೆ ಐಷಾರಾಮಿ ವಸ್ತುಗಳನ್ನು ಸಾಗಿಸುವ ಹಡಗುಗಳಿಂದ ಹಿಡಿದು ಪ್ರಪಂಚದಾದ್ಯಂತ ಅಗರ್ವುಡ್, ಶ್ರೀಗಂಧ, ಕಸ್ತೂರಿ ಮತ್ತು ಇತರ ಭಾರತೀಯ ಸುಗಂಧದ್ರವ್ಯಗಳನ್ನು ವ್ಯಾಪಾರ ಮಾಡಲಾಯಿತು. ಭಾರತವು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖ ದೇಶವಾಗಿದ್ದು, ಅದರ ಬೃಹತ್ ವಿಸ್ತಾರ ಭೂಮಿಯ ಪರಿಮಳಗಳನ್ನು ಪ್ರಪಂಚದಾದ್ಯಂತದ ಮನೆಗಳಿಗೆ ಪಸರಿಸಲಾಯ್ತು!
ಗುಪ್ತರ ಕಾಲದಲ್ಲಿ, ಉಜ್ಜಯಿನಿಯ ಮಾಳವ ಮಹಾರಾಜನ ಆಸ್ಥಾನದಲ್ಲಿದ್ದ ವರಾಹಮಿಹಿರನು ಆರನೇ ಶತಮಾನದಲ್ಲಿ ಬೃಹತ್ಸಂಹಿತೆಯನ್ನು ಬರೆದನು, ಇದನ್ನು ಭಾರತೀಯ ಖಗೋಳಶಾಸ್ತ್ರ ಎಂದು ಕರೆಯಲಾಗುತ್ತದೆ. ಸುಗಂಧದ್ರವ್ಯಗಳ ತಯಾರಿಕೆಯನ್ನು ಬೃಹತ್ಸಂಹಿತೆಯ ಎಪ್ಪತ್ತೇಳನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ವಿವಿಧ ರೀತಿಯ ಸುಗಂಧದ್ರವ್ಯಗಳು, ಅವುಗಳ ನೈಸರ್ಗಿಕ ಮೂಲಗಳು, ತಯಾರಿಕೆಯ ವಿಧಾನ ಇತ್ಯಾದಿಗಳನ್ನು ಈ ಪಠ್ಯದಲ್ಲಿ “ಗಂಧಯುಕ್ತಿ” ಎಂಬ ಶೀರ್ಷಿಕೆಯಡಿಯಲ್ಲಿ ಪರಿಗಣಿಸಲಾಗಿದೆ. ಈ ಅಧ್ಯಾಯದಲ್ಲಿ ತಗರ, ಮಂಜಿಷ್ಠ, ಧೂಪ, ಸೂಕ್ತಿ, ತುರುಸ್ಕ ಮತ್ತು ಅನೇಕ ವಿಭಿನ್ನ ಪದಾರ್ಥಗಳ ಉಲ್ಲೇಖವಿದೆ. ಬೃಹತ್-ಸಂಹಿತಾದಲ್ಲಿ ವಿವಿಧ ಸೂತ್ರಗಳನ್ನು ಸಹ ಉಲ್ಲೇಖಿಸಲಾಗಿದೆ.
ಮಧ್ಯಕಾಲ: ವೆಂದು ಗುರುತಿಸಲಾದ ಮುಗಲ್ಯುಗದಲ್ಲಿ(೧೫೨೬–೧೮೫೭), ಭಾರತದ ಸುಗಂಧದ್ರವ್ಯ ಇನ್ನಷ್ಟು ಮುನ್ನಲೆಗೆ ಬಂತು. ಮುಗಲ್ ಸಾಮ್ರಾಟರು, ವಿಶೇಷವಾಗಿ ಅಕ್ಬರ್, ಜಹಾಂಗೀರ್ ಮತ್ತು ಶಹಜಹಾನ್- ಸುಗಂಧದ್ರವ್ಯದ ಅಭಿಮಾನಿಗಳಾಗಿದ್ದರು. ಈ ಸಮಯದಲ್ಲಿ ಅತ್ತರಗಳ ತಯಾರಿಕೆ ಹಾಗೂ ಬಳಕೆ ಬಹಳ ವಿಸ್ತೃತಕಲೆಯಾಗಿ ಬೆಳೆಯಿತು. ವಿವಿಧ ಹೂಗಳು, ಗಿಡಮೂಲಿಕೆ, ಹಾಗೂ ಮಸಾಲೆಪದಾರ್ಥಗಳನ್ನು ಜಲಾಸವನ ಮಾಡಿ ಗಂಧದೆಣ್ಣೆಗೆ ಸೇರಿಸಿ ಪಾರಂಪರಿಕ ಭಾರತೀಯ ಅತ್ತರುಗಳನ್ನು ತಯಾರಿಸಲಾಗುತ್ತಿತ್ತು.
ಪರಿಮಳ ಉದ್ಯಾನಗಳು: ಮುಗಲ್ ಸಾಮ್ರಾಟರು ವಿಶಾಲವಾದ ಹಾಗೂ ಕುಶಲತೆಯಿಂದ ವಿನ್ಯಾಸಗೊಳಿಸಿದ ಸುಗಂಧಕಾರಿ ಸಸ್ಯಗಳ ಉದ್ಯಾನಗಳನ್ನು (ಶಾಲಿಮಾರ್ಬಾಗ್) ರಚಿಸಿದರು.
ಅವಧ್ನ ದೊರೆ ಗಾಜಿ-ಉದ್-ದೀನ್ ಹೈದರ್ ಷಾ ತನ್ನ ಮಲಗುವ ಕೋಣೆಯ ಸುತ್ತಲೂ ಅತ್ತರ್ನ ಕಾರಂಜಿಗಳನ್ನು ಸಿದ್ಧಪಡಿಸಿಕೊಂಡಿದ್ದನು! ಮೊಘಲರ ಕಾಲದಲ್ಲಿ ಇತ್ತರ್ಗೆ ಒಲವು ಉತ್ತುಂಗಕ್ಕೇರಿತು; ಮೊಘಲರು ಗಾಂಧಿಗರಿಗೆ(ಸುಗಂಧ ತಜ್ಞರು) ಜಮೀನುಗಳನ್ನು ಮಂಜೂರು ಮಾಡಿ ಸಲುಹಿದರು, ಹಾಗೂ ಅವರಿಗೆ ಇತ್ತರ್ಗಳ ವಿವಿಧ ನೂತನ ಪ್ರಭೇದಗಳನ್ನು ಸಂಶೋಧಿಸಲು ಅವಕಾಶ ನೀಡಿದರು.
ವಸಾಹತುಶಾಹಿ ಅವಧಿ:
ಬ್ರಿಟಿಷರ ಪ್ರಭಾವ(೧೮೫೮–೧೯೪೭): ಭಾರತೀಯ ಸುಗಂಧದ್ರವ್ಯದ ಮೇಲೆ ಮಹತ್ವದ ಬದಲಾವಣೆಗಳನ್ನು ತಂದಿತು. ಪಾಶ್ಚಾತ್ಯ ಸುಗಂಧತಂತ್ರಗಳು ಹಾಗೂ ಕೃತಕಪದಾರ್ಥಗಳು ಸ್ಥಳೀಯ ಪಾರಂಪರಿಕ ಉತ್ಪಾದನೆಯಮೇಲೆ ಪ್ರಭಾವಬೀರಿದವು. ಪಾಶ್ಚಾತ್ಯ ಪರಿಮಳಗಳ ಜನಪ್ರಿಯತೆ ಭಾರತದ ಅತ್ತರಗಳ ಬೇಡಿಕೆಯನ್ನು ಕಡಿತಗೊಳಿಸಿತು. ಆದಾಗ್ಯೂ, ಉತ್ತರ ಪ್ರದೇಶದ ಕನ್ನೌಜ್ ಮುಂತಾದ ಪ್ರದೇಶಗಳಲ್ಲಿ ಅತ್ತರ ಉತ್ಪಾದನೆ ಮುಂದುವರಿಯಿತು. ಇಂದಿಗೂ ಕನೌಜ್ಅನ್ನು ‘ಭಾರತದ ಸುಗಂಧದ ರಾಜಧಾನಿ’ ಎಂದೇ ಪರಿಗಣಿಸಲಾಗುತ್ತದೆ.
ಆಧುನಿಕ ಕಾಲ:
ಪುನರುಜ್ಜೀವನ ಮತ್ತು ನಾವೀನ್ಯತೆ: ಇತ್ತೀಚಿನ ದಶಕಗಳಲ್ಲಿ, ಪಾರಂಪರಿಕ ಭಾರತೀಯ ಸುಗಂಧದ್ರವ್ಯದ ಮೇಲೆ ಪುನಃ ಆಸಕ್ತಿ ಹೆಚ್ಚುತ್ತಿದೆ. ಕಲಾವಿದರು ಪಾರಂಪರಿಕ ತಂತ್ರಗಳನ್ನು ಪುನರುಜ್ಜೀವನಗೊಳಿಸುತ್ತಾ, ಶ್ರೇಷ್ಠ ಅತ್ತರಗಳ ಆಧುನಿಕ ರೂಪಾಂತರಗಳನ್ನು ಸೃಷ್ಟಿಸುತ್ತಿದ್ದಾರೆ.
ಜಾಗತಿಕ ಪ್ರಭಾವ: ಭಾರತೀಯ ಸುಗಂಧಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಅದರಂತೆ ಲಕ್ಸುರಿ ಬ್ರಾಂಡ್ಗಳು ಭಾರತೀಯ ಸುಗಂಧ ವಸ್ತುಗಳಾದ, ಶ್ರೀಗಂಧ, ಲಾವಂಚ ಹಾಗೂ ಮಲ್ಲಿಗೆ ಮುಂತಾದವುಗಳನ್ನು ತಮ್ಮ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ.
ಸುಸ್ಥಿರತೆ: ಆಧುನಿಕ ಭಾರತೀಯ ಸುಗಂಧದ್ರವ್ಯೋದ್ಯಮವು, ಪರಿಸರದ ಮೇಲೆ ಆಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಪಾರಂಪರಿಕ ಆಸವನ ವಿಧಾನಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಅಭ್ಯಾಸಗಳಿಗೆ ಒತ್ತು ನೀಡುತ್ತಿದೆ.
ವಿಶಿಷ್ಟ ಭಾರತೀಯ ಸುಗಂಧದ್ರವ್ಯಗಳು ಮತ್ತು ಪದಾರ್ಥಗಳು:
ಕರ್ನಾಟಕದ ಶ್ರೀಗಂಧ: ಭಾರತೀಯ ಸುಗಂಧದ್ರವ್ಯಕ್ಕೆ ಒಂದು ಪ್ರಮುಖ ಕೊಡುಗೆಯಾಗಿದೆ, ಮೈಸೂರು ಸ್ಯಾಂಡಲ್ವುಡ್ ತೈಲವು ಅದರ ಅನನ್ಯ ಶ್ರೀಮಂತ ಪರಿಮಳಕ್ಕಾಗಿ ಪ್ರಸಿದ್ಧವಾಗಿದೆ.
ಮಲ್ಲಿಗೆ: ಸಂಬಾಕ್ ಮತ್ತು ಗ್ರ್ಯಾಂಡಿಫ್ಲೋರಮ್ ಮಲ್ಲಿಗೆಗಳೆಂಬ ತಳಿಗಳು ಭಾರತದಲ್ಲಿವೆ.
ಗುಲಾಬಿ: ಉತ್ತರ ಪ್ರದೇಶದ ಕನ್ನೌಜ್ನ ಗುಲಾಬಿಅತ್ತರ ಅದರ ಆಳವಾದ, ಸಂಕೀರ್ಣ ಪರಿಮಳಕ್ಕಾಗಿ ಪ್ರಸಿದ್ಧ.
ಲಾವಂಚ (ವೇಟಿವರ್ / ಖುಸ): ಲಾವಂಚದ ಬೇರುಗಳು ತಣ್ಣನೆಯ, ಮಣ್ಣುಪಟದ ಪರಿಮಳವನ್ನು ತಯಾರಿಸಲು ಬಳಸಲಾಗುತ್ತವೆ, ಇದು ಪಾರಂಪರಿಕ ಹಾಗೂ ಆಧುನಿಕ ಸುಗಂಧದ್ರವ್ಯಗಳೆರಡರಲ್ಲೂ ಜನಪ್ರಿಯವಾಗಿದೆ.
ಕೇತಕಿ (ಕೇವರಾ / ಪಾಂಡನಸ್) ಹೂವಿನಿಂದ ತೆಗೆಯಲ್ಪಟ್ಟ ಕೇವರಾ ಅತ್ತರ ತನ್ನ ಸಿಹಿ, ಹೂವಿನ ಪರಿಮಳಕ್ಕಾಗಿ ಪ್ರಸಿದ್ಧವಾಗಿದೆ. ಕಾಶ್ಮೀರದ ಕೇಸರಿ- ಬಣ್ಣ ಹಾಗೂ ಪರಿಮಳದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧ.
ಜಟಾಮಾಂಸಿ ವ್ಯಾಲೆರಿಯನೇಸೀ ಕುಟುಂಬಕ್ಕೆ ಸೇರಿದ ಒಂದು ಗಿಡ ಮೂಲಿಕೆ. ‘ಸುಗಂಧ ಮಸ್ತೆ’ ಎಂದೂ ಕರೆಯುವ ಇದರ ಬೇರುಗಳು ಜಟೆ(ಡೆ)ಯಂತೆ ಇರುವುದಲ್ಲದೆ, ಸುಗಂಧಕಾರಿ ತೈಲಹೊಂದಿರುತ್ತದೆ. ಜಟೆಯಿಂದ ಬೇರ್ಪಡಿಸಿದ ಈ ಎಣ್ಣೆಯನ್ನು ಪರಿಮಳಕಾರಿಯಾಗಷ್ಟೇ ಅಲ್ಲದೆ ಶಕ್ತಿವರ್ಧಕ, ಉತ್ತೇಜಕ, ವಿರೇಚಕ ಮುಂತಾದಗುಣಗಳಿಂದ ಔಷಧಿಯಾಗಿ ಬಳಸುತ್ತಾರೆ.
ಡೊಲೊಮಿಯಾ ಕಾಸ್ಟಸ್, ಹಿಂದೆ ಸೌಸುರಿಯಾ ಕಾಸ್ಟಸ್ ಎಂದು ಕರೆಯಲಾಗುತ್ತಿತ್ತು, ಇದನ್ನು ಸಾಮಾನ್ಯವಾಗಿ ಕಾಸ್ಟಸ್, ಇಂಡಿಯನ್ ಕಾಸ್ಟಸ್, ಕುತ್ ಅಥವಾ ಪುಚುಕ್ ಎಂದು ಕರೆಯಲಾಗುತ್ತಿತ್ತು. ಕಾಶ್ಮೀರದ ಋಷಿಗಳು ವಿಶೇಷವಾಗಿ ಈ ಸಸ್ಯವನ್ನು ತಿನ್ನುತ್ತಿದ್ದರು. ಇದರ ಬೇರುಗಳಿಂದ ತೆಗೆದ ಸಾರಭೂತತೈಲಗಳನ್ನು ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕ ಔಷಧಿಗಳಲ್ಲಿ ಮತ್ತು ಸುಗಂಧದ್ರವ್ಯಗಳಲ್ಲಿ ಬಳಸಲಾಗುತ್ತಿದೆ.
ಅನೇಕ ಪರಿಮಳಯುಕ್ತ ವಸ್ತುಗಳು ಮತ್ತು ಸುಗಂಧದ್ರವ್ಯಗಳನ್ನು ಮೈಕಾಂತಿ ಹೆಚ್ಚಿಸಲು ಹಾಗೂ ಡಿಯೋಡರೆಂಟ್ ಆಗಿ ಬಳಸಲಾಗುತ್ತಿತ್ತು. ಶ್ರೀಗಂಧ, ರಕ್ತಚಂದನ, ಅಗರು, ನೀಲಗಿರಿ ಮುಂತಾದ ಗಿಡಮೂಲಿಕೆಗಳ ಎಣ್ಣೆಗಳಿಂದ ತಯಾರಿಸಬಹುದಾದ ವಿವಿಧ ಸೌಂದರ್ಯವರ್ಧಕಗಳು ಹಾಗೂ ಔಷಧಗಳ ಕುರಿತ ವಿವರಣೆಗಳು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ ಇರುವುದು ವಿಶೇಷ.
ಸುಗಂಧದ್ರವ್ಯಗಳ ಔಷಧೀಯ ಮೌಲ್ಯಗಳೂ ಪ್ರಾಚೀನ ಭಾರತೀಯರಿಗೆ ಚಿರಪರಿಚಿತವಾಗಿತ್ತು. ಹಾಗಾಗಿ ಈ ದ್ರವ್ಯಗಳನ್ನು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲೂ ಬಳಸಲಾಗುತ್ತಿತ್ತು. ಉದಾಹರಣೆಗೆ ಧೂಪದಿಂದ ಧೂಮೀಕರಣವನ್ನು ಔಷಧೀಯ ಉದ್ದೇಶಗಳಿಗಾಗಿ ಮಾಡುತ್ತಿದ್ದರು. ದೇಹದ ವಿವಿಧ ಭಾಗಗಳಿಗೆ ಅನುಲೇಪನ ಮಾಡಲು ಸುಗಂಧದ್ರವ್ಯಗಳನ್ನು ಬಳಸಲಾಗುತ್ತಿತ್ತು. ಬಾಯಿಯನ್ನು ಶುದ್ಧೀಕರಿಸುವ ದೃಷ್ಟಿಯಿಂದ ತಾಂಬೂಲದಲ್ಲಿ- ವೀಳ್ಯದೆಲೆ ಮತ್ತು ಅಡಿಕೆಯೊಂದಿಗೆ- ಜಾಯಿಕಾಯಿ, ಪತ್ರೆ, ಲವಂಗ, ಏಲಕ್ಕಿ, ಗುಲಾಬಿಯಿಂದ ಮಾಡಿದ ಗುಲ್ಕನ್, ಬಡೆಸೊಪ್ಪು (ಸೋಂಪ್), ಮುಂತಾದ ವಿವಿಧ ಪರಿಮಳಕಾರಿಗಳನ್ನು ಬಳಸಲಾಗುತ್ತಿದೆ. ತಾಂಬೂಲದಲ್ಲಿ ಬಳಸುವ ಪರಿಮಳಕಾರಿಗಳು ಪ್ರಾದೇಶಿಕ ವೈವಿಧ್ಯತೆಯನ್ನೂ ಹೊಂದಿದೆ. ಇವು ಬಾಯಿಯ ದುರ್ಗಂಧವನ್ನು ಹೋಗಲಾಡಿಸುವುದರೊಂದಿಗೆ, ದಂತದ ಆರೋಗ್ಯ, ಜೀರ್ಣಶಕ್ತಿ, ಮುಖದ ಸೌಂದರ್ಯ, ಲೈಂಗಿಕ ಆರೋಗ್ಯ ಇವೆಲ್ಲದರಮೇಲೂ ಪರಿಣಾಮ ಬೀರುವುದಾಗಿ ದೃಢಪಟ್ಟಿದೆ.
ದೇಹಕ್ಕೆ ಮಸಾಜ್ ಮಾಡಲು ಪರಿಮಳಯುಕ್ತ ತೈಲಗಳ ಬಳಕೆ(ಅಭ್ಯಂಗ) ಇದು ಚರ್ಮವನ್ನು ನಯವಾಗಿಸಿ, ಆರೋಗ್ಯಕರ ಹಾಗೂ ಉತ್ತೇಜಕವಾಗಿ ಇಡುತ್ತದೆ; ‘ಉದ್ವರ್ತನಂ’ ಅಂದರೆ ದೇಹದ ವಿವಿಧ ಭಾಗಗಳಿಗೆ ಮಸಾಜ್ ಮಾಡುವುದು, ‘ಉದ್ಘರ್ಶನಂ’ ಅಂದರೆ ಗಟ್ಟಿಯಾಗಿ ತಿಕ್ಕುವುದು (ಸ್ಕ್ರಬ್ಬಿಂಗ್), ‘ಉತ್ಸಾದನಂ’ ಸುವಾಸನೆಯ ಪುಡಿಗಳಿಂದ ಉಜ್ಜುವುದು. ಇವೆಲ್ಲವೂ ಆರೋಗ್ಯರಕ್ಷಣೆ ಹಾಗೂ ರೋಗ ನಿವಾರಣಾ ಕಾರ್ಯವಿಧಾನಗಳು. ಸುಗಂಧದ್ರವ್ಯಗಳು ಹಾಗೂ ಪರಿಮಳಯುಕ್ತ ಔಷಧಗಳು ಈ ಪ್ರಕ್ರಿಯೆಗಳ ಚಟುವಟಿಕೆ ಹಾಗೂ ಗುಣಮಟ್ಟಗಳನ್ನು ವರ್ಧಿಸುವುದರೊಂದಿಗೆ, ಆಹ್ಲಾದಕತೆಯನ್ನು ಉಂಟುಮಾಡುತ್ತವೆ.
ಕಾಳಿಕಾ ಪುರಾಣದಲ್ಲಿ ವಾಸನೆಗೆ ಅನುಗುಣವಾಗಿ ಹತ್ತು ಬಗೆಯ ಗಂಧದ್ರವ್ಯಗಳನ್ನು ಗುರುತಿಸಲಾಗಿರುವುದು ವಿಶೇಷ: ಇಷ್ಟಗಂಧ (ಕಸ್ತೂರಿ, ಶ್ರೀಗಂಧಗಳಂತೆ ಆಹ್ಲಾದಕರ), ಅನಿಷ್ಟಗಂಧ (ಕೆಟ್ಟ/ಕೊಳೆತ ವಾಸನೆ), ಮಧುರಗಂಧ (ಹೂಗಳ ಸಿಹಿಯ ಪರಿಮಳ), ಆಮ್ಲಗಂಧ (ಕಿತ್ತಳೆ ಜಾತಿಯ ಹುಳಿ ಪರಿಮಳ), ಕಟುಗಂಧ (ಮೆಣಸಿನ ಘಾಟುವಾಸನೆ), ಸಂಹತಗಂಧ (ವಿವಿಧ ಪರಿಮಳಗಳ ಮಿಶ್ರಣ), ಸ್ನಿಗ್ಧಗಂಧ (ತುಪ್ಪದ ಆಪ್ಯಾಯಕಾರಿ ಪರಿಮಳ), ರೂಕ್ಷಗಂಧ (ಸಾಸಿವೆ ಎಣ್ಣೆಯ ಘಾಟು ಪರಿಮಳ), ವಿಶದಗಂಧ (ಹುದುಗಿಸಿದ ಅನ್ನದ ವಾಸನೆ).
ರಾಮಾಯಣ, ಮಹಾಭಾರತ, ಕಾಳಿದಾಸನ ಕಾವ್ಯಗಳು ಮುಂತಾದ ಭಾರತೀಯ ಪುರಾಣ, ಕಾವ್ಯ, ಶಾಸ್ತçಗಳೆಲ್ಲದರಲ್ಲೂ ಸುಗಂಧದ್ರವ್ಯಗಳ ಕುರಿತು ಸಾಕಷ್ಟು ಉಲ್ಲೇಖಗಳಿವೆ.
ಕೊನೇಯದಾಗಿ ಹೇಳುವುದಾದರೆ- ಭಾರತೀಯ ಸುಗಂಧದ್ರವ್ಯ ಇತಿಹಾಸವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಸುಗಂಧ ವಸ್ತುಗಳ ಪ್ರೀತಿಗೆ ಸಾಕ್ಷಿಯಾಗಿದೆ. ಪಾರಂಪರಿಕ ಆಚರಣೆಗಳಿಂದ ಆಧುನಿಕ ನಾವೀನ್ಯತೆಗಳವರೆಗೆ, ಭಾರತೀಯ ಪರಿಮಳಗಳು ತಮ್ಮ ವಿಶಿಷ್ಟ ಸಂಯೋಜನೆಯೊಂದಿಗೆ ಜನರನ್ನು ಆಕರ್ಷಿಸುತ್ತಿವೆ ಹಾಗೂ ಪ್ರೇರೇಪಿಸುತ್ತ್ತಿವೆ.
ಭಾರತ ಸರ್ಕಾರದ ಕ್ರಮಗಳು: ಭಾರತದ ಸಾಂಪ್ರದಾಯಿಕ ಸುಗಂಧದ್ರವ್ಯೋದ್ಯಮವನ್ನು ಕಾಪಾಡಲು, ಹಾಗೂ ಅತ್ತರ ಉದ್ಯಮವನ್ನು ಉತ್ತೇಜಿಸಲು- ಭಾರತ ಸರ್ಕಾರವು ೧೯೯೧ರಲ್ಲಿ ಉತ್ತರಪ್ರದೇಶದ ಕನೌಜಿನಲ್ಲಿ “ಎಫ್ಎಫ್ಡಿಸಿ” “Fragrance & Flavour Development Centre (FFDC)” ಹಾಗೂ ಸುಗಂಧಕಾರಿ ಸಸ್ಯಗಳನ್ನು ಮತ್ತು ಅವುಗಳ ಸಂಸ್ಕರಣ ವಿಧಾನಗಳನ್ನು ಉತ್ತೇಜಿಸಲು ಲಖ್ನೋದಲ್ಲಿ “ಸಿಐಎಮ್ಎಪಿ” Central Institute of Medicinal and Aromatic Plants (CIMAP) ಎಂಬ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿತು. ಈ ಸಂಸ್ಥೆಗಳ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಂತೆಯೆ ಭಾರತದ ಶ್ರೀಮಂತ ಪರಿಮಳ ಪರಂಪರೆ ಅವಿಚ್ಛಿನ್ನವಾಗಿ ಸಾಗುತ್ತಿರಲಿ.
-ಸುಗಂಧವಿನ್ನೂ ಇದೆ.