18/04/2026
ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಯ, ಹೊಸ ಟ್ರಾಮಾ ಕಟ್ಟಡದ ಸಭಾಂಗಣದಲ್ಲಿ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ, ಕಾಲೇಜಿನ ವೈಜ್ಞಾನಿಕ ಶೈಕ್ಷಣಿಕ ಮತ್ತು ಸಂಶೋಧನಾ ಸಮಿತಿ (SARS) ಹಾಗೂ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದೊಂದಿಗೆ “ಕ್ಯಾನ್ಸರ್ ನೊಂದಿಗೆ ಹೋರಾಟ” ಕುರಿತು ಅತಿಥಿ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಅತಿಥಿ ಉಪನ್ಯಾಸಕರಾದ ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ವೈದ್ಯೆ ಡಾ.ಗೀತಾ.ಶೆಟ್ಟಿ ಮಾತನಾಡುತ್ತ, “ಮೂರು ವರ್ಷಗಳ ಹಿಂದೆ ಸಾಮಾನ್ಯ ಬೇಧಿ, ಅತಿಸಾರದಿಂದ ಶುರುವಾದ ತಮ್ಮ ಕಾಯಿಲೆ ಉಲ್ಬಣಗೊಳ್ಳುತ್ತ, ಲಿವರ್ ವೈಫಲ್ಯ ಹಂತ ತಲುಪಿದರೂ, ಎಷ್ಟೇ ನವೀನ ಮಾದರಿಯ ರೋಗ ಪತ್ತೆಯ ವಿಧಾನಗಳಿಂದಲೂ ಪ್ರಾಥಮಿಕ ಕಾರಣ ತಿಳಿಯಲು ತಿಂಗಳುಗಳೇ ಬೇಕಾದವು. ತಾವು ಅತಿ ವಿರಳವಾದ ಲಿವರ್ ಮೆಟಾಸ್ಟಾಟಿಕ್ ಕಾರ್ಸಿನಾಯ್ಡ ಟ್ಯುಮರ್ ನಿಂದ ಬಳಲಿದ್ದು, ರೋಗ ಲಕ್ಷಣಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ತಾವು ಅನುಭವಿಸಿದ ಶಾರೀರಿಕ, ಮಾನಸಿಕ, ಸಾಮಾಜಿಕ ವೇದನೆ ಯಾವ ಶತ್ರುಗಳಿಗೂ ಬರಬಾರದು ಎಂದು ದೇವರಲ್ಲಿ ಪ್ರಾರ್ಥಿಸುವೆ" ಎಂದು ಹೇಳಿದರು. ಭಗವದ್ಗೀತೆಯ "ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಶು ಕದಾಚನ" ವಾಣಿಯಂತೆ, ನಾವು ಮಾಡಿದ ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಸತ್ಕಾರ್ಯಗಳೇ ಆಪತ್ಕಾಲದಲ್ಲಿ ನಮ್ಮನ್ನು ಕಾಪಾಡುವವು ಎಂದು ಹೇಳಿದರು. ತಮ್ಮ ಪತಿ, ಪರಿವಾರ, ಸ್ನೇಹಬಳಗದ ತಮ್ಮ ಕಷ್ಟಕಾಲದಲ್ಲಿಯ ಸೇವೆ ಸಹಕಾರ ಅನನ್ಯವಾಗಿತ್ತು ಎಂದರು. ತಮ್ಮ ಲಿವರ್ ಕಸಿ ಮತ್ತು ಇತರ ಚಿಕಿತ್ಸೆಗಳನ್ನು ಭಾರತದಲ್ಲಿಯೇ ಪಡೆದಿದ್ದು, ಭಾರತೀಯ ವೈದ್ಯಕೀಯ ಚಿಕಿತ್ಸೆ ವಿಶ್ವದಲ್ಲೇ ಶ್ರೇಷ್ಠವೆಂದರು.
ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ.ಕೋಟೆಣ್ಣವರ ಸಭೆಯನ್ನು ಸ್ವಾಗತಿಸಿ ಮಾತನಾಡುತ್ತ, "ಡಾ.ಗೀತಾ.ಶೆಟ್ಟಿ ತಮ್ಮ ಪಿಡಿಜೆ ಪಿ. ಯು. ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಹಿಂದೆಯೂ ಮತ್ತು ಮುಂದೆಯೂ ಎಂದೆಂದಿಗೂ ನಮಗೆ ಮಾದರಿಯಾಗಿದ್ದಾರೆ" ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಡಾ.ವಿಜಯಾ.ಪಾಟೀಲ, ಮಾತನಾಡಿ "ಡಾ.ಗೀತಾ.ಶೆಟ್ಟಿಯವರು ಮಾದರಿ ವೈದ್ಯರೂ ಮತ್ತು ಮಾದರಿ ರೋಗಿಯೂ ಹೌದು. ಅವರ ಧೈರ್ಯ, ಇಚ್ಛಾಶಕ್ತಿ ಮತ್ತು ಸೇವಾ ಉತ್ಸುಕತೆಗಳು ಮೆಚ್ಚುವಂಥವು. ಎರಡು ವರ್ಷ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಜಯಿಸಿದ ಅವರು ವಿಶ್ವವಿಖ್ಯಾತ ಸ್ತನ ಶಸ್ತ್ರಚಿಕಿತ್ಸಕರಾಗಿದ್ದು, ವಿಜಯಪುರದ ಹೆಮ್ಮೆಯ ಸುಪುತ್ರಿ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಡಾ. ತೇಜಸ್ವಿನಿ.ವಲ್ಲಭ, ಹಿರಿಯ ಉಪ ಪ್ರಾಚಾರ್ಯ ಡಾ.ವಿ.ಟಿ.ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ.ಸಂಜೀವ.ಬೆಂಟೂರ, ಡೀನ್ ಆರ್ & ಡಿ ಡಾ.ಎಂ.ಎಂ.ಪಾಟೀಲ, ಎಸ್.ಎ.ಆರ್.ಎಸ್ ಚೇರಮನ್ ಡಾ.ಲತಾದೇವಿ ಎಚ್.ಟಿ, ,ಜಿಲ್ಲಾ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಆನಂದ.ಝಳಕಿ, ಡಾ.ವಿಜಯ.ಕಟ್ಟಿ, ಡಾ.ಗಿರೀಶ.ಕುಲ್ಲೊಳ್ಳಿ, ಡಾ.ವಿಕ್ರಂ.ಸಿಂದಗಿಕರ ಮತ್ತು ಸ್ನಾತಕ,ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ.ಬಳೂರಕರ ವಂದಿಸಿದರು.